Pages Menu
TwitterRssFacebook
Categories Menu

Posted by on Aug 16, 2010 in Jotter | 6 comments

ಶ್ರೀ ಮಲೆ ಮಹದೇಶ್ವರ ಕಿರು ಪರಿಚಯ

ನಿನ್ನ ಪೂಜೆಗೆ ಬಂದೆ ಮಾದೇಶ್ವರಾ.. ಎನ್ನ ಕರುಣಲಿ ಕಾಯೋ ಮಾದೇಶ್ವರಾ..

ನಮ್ಮ ದೇಶ ತೀರ್ಥ ಕ್ಷೇತ್ರಗಳ ತವರೂರು. ಕಾಶಿ, ರಾಮೇಶ್ವರ, ಕೈಲಾಸ, ಶ್ರೀಶೈಲ, ಮುಂತಾದವುಗಳು ಭಾರತ ದೇಶದ ಮಹಾ ತೀರ್ಥಕ್ಷೆತ್ರಗಳೆನಿಸಿವೆ. ಪುರಾತನ ಕಾಲದಿಂದಲೂ ಇಂತಹ ತೀರ್ಥ ಕ್ಷೇತ್ರಗಳಿಗೆ ಭೇಟಿ ಕೊಡುವುದು ಹಾಗು ದೇವರ ದರ್ಶನ ಮಾಡುವುದು ಅತ್ಯಂತ ಪವಿತ್ರ ಕಾರ್ಯಗಳಾಗಿವೆ. ಅಂತೆಯೇ ನಮ್ಮ ಕರುನಾಡು ಸಹ ಕಲೆಗಳ ಬೀಡು, ಪುಣ್ಯಕ್ಷೇತ್ರಗಳ ನಾಡು. ಈ ನಾಡಿನಲ್ಲಿ ಶಿವಯೋಗಿಗಳ ತಪೋಭೂಮಿಗಳನ್ನು ಕೂಡ ಪುಣ್ಯಕ್ಷೇತ್ರಗಳೆಂದು ಭಾವಿಸಲಾಗಿದೆ. ನಮ್ಮ ಕನ್ನಡ ಭೂಮಿಯಲ್ಲಿ ಎಡೆಯೂರು, ಸಿದ್ಧಗಂಗ, ರೇವಣ್ಣ ಸಿದ್ಧೇಶ್ವರ ಬೆಟ್ಟ, ಮೊದಲಾದವು ಶಿವಯೊಗಿಗಳ ತಪಸ್ಸಿನಿಂದ ಪಾವನವಾದ ಸ್ಥಳಗಳು. ಇವುಗಳ ಸಾಲಿಗೆ ಸೇರುವ ಮತ್ತೊಂದು ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟ.

ಶ್ರೀ ಮಲೆ ಮಹದೇಶ್ವರ ಬೆಟ್ಟ

ಈ ಕ್ಷೇತ್ರವು, ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ, ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ ಮಹತ್ವವನ್ನು ಪಡೆದುಕೊಂಡು ಬಂದಿದೆ. ಬೆಂಗಳೂರಿನಿಂದ ದಕ್ಷಿಣ ಮುಖವಾಗಿ, ಮದ್ದೂರು, ಮಳವಳ್ಳಿ, ಕೊಳ್ಳೇಗಾಲ, ಮಧುವನಳ್ಳಿ, ಸಿಂಗನಲ್ಲೂರು (ನಟ ಸಾರ್ವಭೌಮ ಡಾ|| ರಾಜ್ ಕುಮಾರ್ ಅವರ ಹುಟ್ಟೂರು), ಕಾಮಗೆರೆ, ಹನೂರು, ಅಜ್ಜೀಪುರ, ರಾಮಾಪುರ, ಕೌದಳ್ಳಿ ಮಾರ್ಗವಾಗಿ ಸಂಚಿಸಿದರೆ ಶ್ರೀ ಮಲೆ ಮಹದೇಶ್ವರ ಬೆಟ್ಟದ ತಪ್ಪಲು, ತಾಳಬೆಟ್ಟ ಸಿಗುತ್ತದೆ.

ತಾಳಬೆಟ್ಟ

ತಾಳಬೆಟ್ಟ

ಅಲ್ಲಿಂದ ಮಹದೇಶ್ವರ ದೇವಾಲಯವನ್ನು ತಲುಪಲು ಕಾಲುದಾರಿಯಲ್ಲಿ ೯ ಮೈಲಿಗಳ ಪ್ರಯಣವಾಗುತ್ತದೆ. ಏಳು ಬೆಟ್ಟಗಳನ್ನು (ಆನೆಮಲೆ, ಕಾನಮಲೆ, ಗುತ್ತಿಮಲೆ, ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ) ಹತ್ತಿ, ಇಳಿದರೆ ಶ್ರೀ ಮಾದೇಶ್ವರ ದೇವಸ್ಥಾನವಿರುವ ನಡುಮಲೆ ಸಿಗುತ್ತದೆ. ಬಸವನ ದಾರಿ ಮತ್ತು ಸರ್ಪನ ದಾರಿ ಎಂಬೆರಡು ಕಾಲುದಾರಿ ಮಾರ್ಗಗಳಿವೆ. ಸರ್ಪನ ದಾರಿ ಬಹಳ ಕಡಿದಾಗಿದೆ ಹಾಗೂ ಬಸವನ ದಾರಿ ಸುಗಮವಾಗಿದೆ (ಈ ದಾರಿಗಳ ಹೆಸರುಗಳ ಹಿನ್ನಲೆಯನ್ನು ನನ್ನ ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ). ಇದರ ಜೊತೆಗೆ ಬೆಟ್ಟವನ್ನು ಹತ್ತಲು ಸುಲಭವಾದ ೧೦ ಮೈಲಿಗಳ ಮೊಟಾರು ರಸ್ತೆಯೂ ಇದೆ. ವಾಹನಗಳಲ್ಲಿ ಹೋಗುವ ವ್ಯವಸ್ಥೆಯಿದ್ದರೂ, ಈಗಲೂ ಕಾಲುದಾರಿಯಲ್ಲಿ ಹೋಗುವ ಭಕ್ತರನ್ನು ಕಾಣಬಹುದು.

ಶ್ರೀ ಮಹದೇಶ್ವರ ದೇವಾಲಯವು ಸುಂದರ ಪರ್ವತ ಪ್ರದೇಶಗಳಲ್ಲಿ ನೆಲೆಸಿರುವುದರಿಂದ, ಚಾರಣಿಕರು ಪ್ರಕೃತಿ ಸೌಂದರ್ಯವನ್ನು ಆಹ್ವಾದಿಸಲು ಇಲ್ಲಿಗೆ ಬರುತ್ತಾರೆ. ಸಾಮಾನ್ಯವಾಗಿ ಬೆಟ್ಟದ ಪ್ರದೇಶಗಳಲ್ಲಿ ಜಿಂಕೆಗಳು, ಆನೆಗಳು ಹಾಗು ಒಮ್ಮೊಮ್ಮೆ ಹುಲಿಗಳನ್ನು ನೋಡಬಹುದು. ಪಕ್ಷೀವೀಕ್ಷಕರಿಗೂ ಇಲ್ಲಿ ಹಲವಾರು ಅಪರೂಪದ ಪಕ್ಷಿಗಳು ಕಾಣ ಸಿಗುತ್ತವೆ. ಅತೀ ಹೆಚ್ಚಾಗಿ ಮೈನಾ, ಗುಬ್ಬಚ್ಚಿ, ಬುಲ್ ಬುಲ್, ಬೀ ಈಟರ್, ಕಿಂಗ್ ಫಿಶರ್ ಮತ್ತು ವಿವಿಧ ಬಣ್ಣಗಳ ಆಕರ್ಷಕ ಚಿಟ್ಟೆಗಳನ್ನು ನೋಡಬಹುದು. ಈ ಕ್ಷೇತ್ರದ ಸುತ್ತ ಮುತ್ತಲೂ ಅಣ್ಣೇವಲ್ಲ, ಕೊಂಬುದಿಕ್ಕಿ, ಕೊಕ್ಕುವಾರ, ತೋಕಾಶಿ, ದೊಡ್ಡಾಣೆ, ಹಿರಿಯೂರು, ಇಂಡಿಗನತ್ತ, ನಾಗಮಲೆ, ಪಡಸತ್ತೆ ಮುಂತಾದ ಸಣ್ಣ ಪುಟ್ಟ ಊರುಗಳಿವೆ.

ಸ್ವಾಮಿಯ ದೇವಾಲಯದ ಸುತ್ತಲೂ ಸುಂದರವಾದ ಪೌಳಿ ಮತ್ತು ಮಂಟಪಗಳಿಂದ ಅಲಂಕೃತವಾಗಿದೆ. ದೇವಾಲಯದ ಮುಖ ಪಶ್ಚಿಮ, ಗೋಪುರ ದಕ್ಷಿಣ, ಉತ್ತರಕ್ಕೆ ಆಲಂಬಡಿ ಬಸವೇಶ್ವರ ದ್ವಾರ ಎಂಬ ಬಾಗಿಲುಗಳಿವೆ. ದೇವಾಲಯದಲ್ಲಿ ಗರ್ಭಗುಡಿ ೧ ಅಂಕಣ, ಸುಖನಾಸಿ ೧ ಅಂಕಣ, ಮುಖ ಮಂಟಪ ೯ ಅಂಕಣ, ನವರಂಗ ಮಂಟಪ ೨೫ ಅಂಕಣ, ಪೂರ್ವ ಪಶ್ಚಿಮ ಗೋಪುರ ೨೪ ಹಾಗು ದಕ್ಷಿಣೋತ್ತರ ಗೋಪುರವು ೧೮ ಅಂಕಣಗಳು ಉಳ್ಳವಾಗಿವೆ.

ಮುಖ ಪಶ್ಚಿಮ ದ್ವಾರ

ಮುಖ ಪಶ್ಚಿಮ ದ್ವಾರ

ದಕ್ಷಿಣ ದ್ವಾರ

ದಕ್ಷಿಣ ದ್ವಾರ

ಆಲಂಬಡಿ ಬಸವೇಶ್ವರ

ಆಲಂಬಡಿ ಬಸವೇಶ್ವರ

ಸುಖನಾಸಿ ಮಂಟಪ

ಸುಖನಾಸಿ ಮಂಟಪ

ಗರ್ಭಗುಡಿ

ದೇವಾಲಯದ ಮುಖ ಮಂಟಪದಲ್ಲಿ ಪ್ರಾಚೀನಕಾಲದ ವೀರಭದ್ರನ ವಿಗ್ರಹವಿದೆ. ಆದ್ದರಿಂದ ಈ ಕ್ಷೇತ್ರವು ಬಹಳ ಹಿಂದಿನಿಂದಲೂ ವೀರಶೈವರ ಕ್ಷೇತ್ರವಾಗಿತ್ತೆಂದು ತಿಳಿಯುತ್ತದೆ. ಪರಿಣಿತರು, ಶ್ರೀ ಮಾದೇಶ್ವರರ ಕಾಲ ಸುಮಾರು ೧೪ನೇ ಶತಮಾನವೆಂದು ನಿರ್ಧರಿದ್ದಾರೆ. ಇವರು ಶೂನ್ಯಪೀಠದ (ವೀರಶೈವ ಸಾಹಿತ್ಯದಲ್ಲಿ ಶೂನ್ಯ ಅಂದರೆ ಶಿವ, ಪೀಠ ಅಂದರೆ ಗದ್ದಿಗೆ ಎಂದರ್ಥ. ಆದುದರಿಂದ ಶೂನ್ಯಪೀಠ ಅಂದರೆ ಶಿವನ ಕುರಿತು ಭೊದಿಸುವ ಗದ್ದಿಗೆ ಎಂದರ್ಥ) ಆರನೇ ಜಗದ್ಗುರುಗಳೆಂದು ವೀರಶೈವರ ಗ್ರಂಥಗಳಲ್ಲಿ ಹಿಂದಯೇ ನಿರೂಪಿಸಲಾಗಿದೆ. ನನ್ನ ಮುಂದಿನ ಸಂಚಿಕೆಯಲ್ಲಿ ಶ್ರೀ ಮಾದೇಶ್ವರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಬರೆಯುತ್ತೇನೆ.

ಶ್ರೀ ದೇವಾಲಯದಲ್ಲಿ ಹುಲಿವಾಹನ, ವೃಷಭವಾಹನ ಮತ್ತು ಆಳಿದ ಮಹಾಸ್ವಾಮಿಯವರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಒಪ್ಪಿಸಿದ ರುದ್ರಾಕ್ಷಿ ಮಂಟಪ ವಾಹನದ ಉತ್ಸವಗಳು ವೈಭವದಿಂದ ನಡೆಯುತ್ತದೆ. ಹುಲಿ ಮತ್ತು ವೃಷಭ ವಾಹನಗಳು ಬೆಳ್ಳಿಯಿಂದ ವಿರಚಿತವಾಗಿದೆ. ನೂತನ ಬಂಗಾರದ ರಥವನ್ನು ಮೈಸೂರಿನ ಮಹಾರಾಜರು ಕೈ|| ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ೧೯೩೫ನೇ ವರ್ಷದಲ್ಲಿ ಮಾಡಿಸಿ ಕೊಟ್ಟಿದ್ದಾರೆ. ಈ ಸುಂದರವಾದ ರಥಕ್ಕೆ ತಂಜಾವೂರಿನ ಚತುರ ಕೆಲಸಗಾರರಿಂದ ಕೆತ್ತಿಸಲಾಗಿದೆ. ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೮ರಲ್ಲಿ ಸ್ವಾಮಿಗೆ ಬಂಗಾರದ ಕವಚವನ್ನು ಮಾಡಿಸಿಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಶಿವರಾತ್ರಿ, ಯುಗಾದಿ, ದೀಪಾವಳಿ ಮತ್ತು ಮಹಾನವಮಿಯ ದಿನಗಳಂದು ಜಾತ್ರೆಗಳು ನಡೆಯುತ್ತವೆ. ಜಾತ್ರೆಯ ಸಂದರ್ಭಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಾರೆ.

ರುದ್ರಾಕ್ಷಿ ಮಂಟಪ ವಾಹನ

ವೃಷಭವಾಹನ

ಹುಲಿವಾಹನ

ಬಂಗಾರದ ರಥ

ನಡುಮಲೆಯ ಸಮೀಪದಲ್ಲಿ ಪ್ರಸಿದ್ದಿಯಾಗಿರುವ ಮತ್ತೊಂದು ಬೆಟ್ಟ, ನಾಗಮಲೆ. ಈ ಬೆಟ್ಟದ ತುದಿಯಲ್ಲಿ, ಶಿವಲಿಂಗಕ್ಕೆ ಅಂಟಿಕೊಂಡಿರುವ ನಾಗರಹಾವಿನ ರೂಪದಲ್ಲಿರುವ ಬಂಡೆಯನ್ನು ನೋಡಬಹುದು. ಇದರಿಂದಾಗಿಯೇ ಈ ಬೆಟ್ಟಕ್ಕೆ ನಾಗಮಲೆ ಎಂದು ಹೆಸರು. ನಿಜಕ್ಕೂ ಪ್ರಕೃತಿ ವಿಸ್ಮಯಕ್ಕೆ ಬೆರಗಾಗದೆ ಇರುವರು ಯಾರು ಇಲ್ಲ. ಇಲ್ಲಿಯೂ ಒಂದು ಪುಟ್ಟ ದೇವಸ್ಥಾನವಿದೆ. ಭಕ್ತಾದಿಗಳು ಮಾದೇಶ್ವರನ ದರ್ಶನ ಪಡೆದು, ಬೆಟ್ಟವನ್ನು ಹತ್ತುವ ಶಕ್ತರು ಇಲ್ಲಿಯೂ ಬರುವರು. ಈ ಬೆಟ್ಟವು ಮಾದೇಶ್ವರ ಬೆಟ್ಟದಿಂದ ೧೫ ಮೈಲಿಗಳಷ್ಟು ದೂರವಿದೆ. ಸುಮಾರು ೯ ಮೈಲಿಗಳವರೆಗೆ, ಇಂಡಿಗನತ್ತ ಎಂಬ ಊರಿನವರೆಗೆ ಜೀಪ್ ದಾರಿಯಿದೆ. ನಂತರ ಕಾಲುದಾರಿಯಲ್ಲಿಯೇ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹತ್ತಿ, ಇಳಿದು ೬ ಮೈಲಿಗಳಷ್ಟು ಕ್ರಮಿಸಿದರೆ ನಾಗಮಲೆ ಸಿಗುತ್ತದೆ. ದಾರಿಯಲ್ಲಿ ಬೆಟ್ಟ-ಗುಡ್ಡಗಳು, ದಟ್ಟಕಾಡು, ಕೆರೆ-ಹಳ್ಳಗಳ ನೋಟ ರಮಣೀಯ. ಒಮ್ಮೊಮ್ಮೆ ದಾರಿಯಲ್ಲಿ ಆನೆಗಳೂ ಸಿಗುವುದುಂಟು. ಅಲ್ಲಲ್ಲಿ ಸೋಲಿಗರು, ಕಾಡುಕುರುಬರ ಚಿಕ್ಕ ಗುಡಿಸಲುಗಳು ಮತ್ತು ಅವರು ವ್ಯವಸಾಯ ಮಾಡುವ ದೃಶ್ಯಗಳನ್ನು ನೋಡಬಹುದು.

ಇಂಡಿಗನತ್ತ

ನಾಗಮಲೆ

ನಾಗಮಲೆ ದೇವಸ್ಥಾನ

ನಾಗಮಲೆ ಸುತ್ತಮುತ್ತ

ನಾಗಮಲೆ ಸುತ್ತಮುತ್ತ

6 Comments

    • ಮೆಚ್ಚಿದ್ದಕ್ಕೆ ಧನ್ಯವಾದಗಳು.

  1. Pls write about history of
    sri male mahadeshwara

  2. Please write sankamman salu

  3. Sankamman salu

  4. Am very glad for this information thank you so much i need life history book

Post a Reply

Your email address will not be published. Required fields are marked *