Pages Menu
TwitterRssFacebook
Categories Menu

Posted by on Aug 16, 2010 in Jotter | 0 comments

ನಮ್ಮೂರ ಹಬ್ಬ

ಊರ ಹಬ್ಬ ಅಥವಾ ಜಾತ್ರೆ ಎಂದರೆ ನಮ್ಮ ಕಣ್ಣ ಮುಂದೆ ಸರಿಯುವುದು ಜನ ತುಂಬಿದ ಊರು, ಸಡಗರ ಸಂಭ್ರಮದ ಬೀದಿಗಳು, ಗ್ರಾಮದೇವತೆ, ಆ ಪ್ರದೇಶಕ್ಕೆ ಸೀಮಿತವಾದ ವಿಶಿಷ್ಟ ಆಚರಣೆಗಳು, ಸಂಪ್ರದಾಯಗಳು. ಇಂದಿಗೂ ನಗರದಲ್ಲಿ ಹುಟ್ಟಿ ಬೆಳೆದವರಿಗೆ ಜಾತ್ರೆಗಳದ್ದು ಅಪರಿಚಿತ ಅನುಭವ. ಹಳ್ಳಿಯ ಹಿನ್ನಲೆಯ ನಗರವಾಸಿಗಳಿಗೆ ನೆನಪುಗಳ ಮೆರವಣಿಗೆಗೊಂದು ಮತ್ತೊಂದು ಅವಕಾಶ.

ಇಲ್ಲೊಂದು ಊರು, ನಾನು ಓದಿ, ಬೆಳೆದ ಊರು, ಹೆಸರು ಮಳವಳ್ಳಿ. ಸಕ್ಕರೆಯ ನಾಡು ಮಂಡ್ಯ ಜಿಲ್ಲೆಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೦೪ ಕಿ.ಮಿ. ದೂರದಲ್ಲಿದೆ. ಸಿಡಿ ಹಬ್ಬ ಇಲ್ಲಿಯ ಊರ ಹಬ್ಬ, ಸಿಡಿ ಜಾತ್ರೆ ಅಂತಲೂ ಪ್ರಸಿದ್ದಿ. ಪ್ರತಿ ವರ್ಷ ಜನವರಿಯ ಕೊನೆಯ ಅಥವಾ ಫೆಬ್ರವರಿಯ ಮೊದಲ ಹುಣ್ಣಿಮೆಗೆ ಬರುವ ಶುಕ್ರವಾರ ಹಾಗು ಶನಿವಾರದಂದು ಸಿಡಿ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಜನವರಿ ೨೯ ಮತ್ತು ೩೦ರಂದು ನಡೆಯಲಿದೆ. ಹಬ್ಬದ ಆಚರಣೆಗಳ ಉಸ್ತುವಾರಿ ಒಂದು ಪಂಗಡ ಅಥವಾ ಒಂದು ಜನಾಂಗಕ್ಕೆ ಸೇರಿದ್ದಲ್ಲ ಎಂಬುದು ಇಲ್ಲಿಯ ವಿಶೇಷತೆ. ಹಿಂದಿನ ಕಾಲದಿಂದಲೂ ಎಲ್ಲಾ ಕೋಮಿನವರು ಒಂದೊಂದು ಜವಾಬ್ದಾರಿ ಹೊತ್ತು, ಸೌಹಾರ್ದತೆಯಿಂದ ಹಬ್ಬ ಆಚರಿಸುತ್ತಾರೆ.

ಇಲ್ಲಿಯ ಗ್ರಾಮದೇವತೆ, ದಂಡಿನ ಮಾರಮ್ಮ. ಹಿಂದಿನ ಕಾಲದಲ್ಲಿ ರಾಜರು ದಂಡೆತ್ತಿ ಹೋಗುವ ಮುನ್ನ ಈ ದೇವತೆಯ ಆಶೀರ್ವಾದ ಪಡೆದು ಹೋಗುತ್ತಿದ್ದರು. ಆದ್ದರಿಂದ ಈ ದೇವಿಗೆ ದಂಡಿನ ಮಾರಮ್ಮ ಎಂಬ ಹೆಸರು ಪ್ರಾಪ್ತಿಯಾಯಿತೆನ್ನುತ್ತಾರೆ ಇಲ್ಲಿಯ ಸ್ಥಳೀಯರು. ಗ್ರಾಮಕ್ಕೆ ಯಾವುದೇ ರೀತಿಯ ಮಾರಕಗಳು ಬಾರದಿರಲಿ ಹಾಗೂ ಗ್ರಾಮಸ್ಥರು ಸುಭಿಕ್ಷವಾಗಿರಲೆಂದು ಸಿಡಿ ಹಬ್ಬವನ್ನು ಊರಿನ ಜನರು ಶ್ರದ್ಧೆಯಿಂದ ಆಚರಿಸುತ್ತಾರೆ. ಭಕ್ತಿ ಪೂರ್ವಕ ಹಬ್ಬದ ಆಚರಣೆಯಿಂದ ಸುಖ-ಶಾಂತಿ ಲಭಿಸುತ್ತದೆ ಮತ್ತು ತಮ್ಮ ಕೋರಿಕೆಗಳು ಈಡೇರುತ್ತವೆ ಎಂಬುದು ಇಲ್ಲಿಯ ಭಕ್ತರ ನಂಬಿಕೆ.

ಹಬ್ಬದ ವಾರದ ಹಿಂದಿನ ಶುಕ್ರವಾರ ಮತ್ತು ಮಂಗಳವಾರದಂದು ದಂಡಿನ ಮಾರಮ್ಮ ದೇವಿಗೆ ಅದ್ದೂರಿ ಪೂಜೆ ಸಲ್ಲಿಸುವುದರ ಮೂಲಕ ಸಿಡಿ ಹಬ್ಬ ಪ್ರಾರಂಭವಾಗುತ್ತದೆ. ಶುಕ್ರವಾರದ ಸಂಜೆ ಸಿಡಿರಣ್ಣ ಅಲಂಕೃತಗೊಳ್ಳುವ ಸಮಯ. ಸುಮಾರು ೪೪ ಅಡಿ ಉದ್ದದ ತವಸದ ಮರದ ಕಂಬಕ್ಕೆ ಮನುಷ್ಯನ ಕಂಚಿನ ಪ್ರತಿಮೆಯನ್ನು ನೇತು ಹಾಕಿ, ಬಲೂನು, ಹೂಗಳಿಂದ ಸಿಂಗರಿಸಿದ ರಥಕ್ಕೆ ಸಿಡಿರಣ್ಣ ಎಂದು ಹೆಸರು. ಮೆರವಣಿಗೆಗೆ ಹೊರಟ ಸಿಡಿರಣ್ಣನಿಗೆ ಬಾಳೆ ಹಣ್ಣು, ಜವನವನ್ನು ಎಸೆಯುವುದು ಪದ್ದತಿ.ಬಹಳ ಹಿಂದಿನ ದಿನಗಳಲ್ಲಿ ಕಂಚಿನ ಪ್ರತಿಮೆಯ ಬದಲು ಮನುಷ್ಯನನ್ನು ನೇತು ಹಾಕುವ ಪ್ರತೀತಿಯಿತ್ತು. ಕಾಲ ಕ್ರಮೇಣ ಮನುಷ್ಯನನ್ನು ಕಂಬಕ್ಕೆ ನೇತು ಹಾಕುವ ಆಚರಣೆ ಹಿಂಸೆಯ ಸಂಕೇತವೆನಿಸಿ, ಕಂಚಿನ ಪ್ರತಿಮೆಯನ್ನು ಕಟ್ಟುವ ಪದ್ದತಿ ಶುರುವಾಯಿತು. ಹಬ್ಬದಲ್ಲಿ ಸಿಡಿರಣ್ಣನ ಜೊತೆಗೆ ಅಣ್ಣೂರು ತಿಬ್ಬಾದೇವಿ ಹಾಗೂ ತೊರೆ ಬೊಮ್ಮನಹಳ್ಳಿ ಪಟ್ಟಲದಮ್ಮ ದೇವಿಗಳ ಉತ್ಸವ ಮೂರ್ತಿಗಳು ಕೂಡ ಮೆರವಣಿಗೆಗೆ ಸಜ್ಜಾಗುತ್ತವೆ. ಅಲಂಕೃತಗೊಂಡ ಎಲ್ಲಾ ರಥಗಳು ರಾತ್ರಿಯೆಲ್ಲಾ ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಹೊರಟು, ಬೆಳಗಿನ ಜಾವದ ಹೊತ್ತಿಗೆ ಪಟ್ಟಲದಮ್ಮನ ದೇಗುಲ ಸೇರುತ್ತದೆ. ಜನಪದ ಕಲಾ ತಂಡಗಳು, ಕೋಲಾಟಗಳು, ತಂಬಿಟ್ಟು ಆರತಿ ಹೊತ್ತ ಹೆಂಗಸರು ಹಾಗು ಮತ್ತಿತರ ಮನರಂಜನೆ ನೀಡುವ ತಂಡಗಳು ಮೆರವಣಿಗೆಯ ಜೊತೆಯಾಗುತ್ತಾರೆ. ಉತ್ಸವ ಮೂರ್ತಿಗಳ ಪೂಜೆಯ ನಂತರ, ಪೂಜಾರಿಯಿಂದ ಬೆಂಕಿ ಕೊಂಡ ಹಾಯಿಸುತ್ತಾರೆ. ತದ ನಂತರ ನೂರಾರು ಭಕ್ತರು ತಮ್ಮ ಹರಕೆಯ ನಿಮಿತ್ತ ಇಲ್ಲಿ ಬೆಂಕಿ ಕೊಂಡ ಹಾಯುತ್ತಾರೆ ಹಾಗೂ ಪ್ರಾಣಿಗಳನ್ನು ಬಲಿ ನೀಡಿ ಪೂಜೆ ಸಲ್ಲಿಸುತ್ತಾರೆ.

ಜಾತ್ರೆಗಳ ಮತ್ತೊಂದು ವಿಶೇಷತೆ ಅಂಗಡಿಗಳು. ಕಡ್ಲೆಪುರಿ, ಬತಾಸು, ಕಡ್ಲೆಕಾಯಿ, ಬಲೂನು, ಬೊಂಬೆಗಳು, ಮಿಠಾಯಿಗಳು ಎಲ್ಲವೂ ಲಭ್ಯ. ಖರೀದಿಗಂತೂ ತುಂಬಾ ಆಯ್ಕೆಗಳು ಇರುತ್ತವೆ. ಅದರಲ್ಲೂ ಮಕ್ಕಳಿಗಂತೂ ವಿವಿಧ ಆಟಿಕೆಗಳು ಲಭ್ಯ. ದಿನವಿಡೀ ಜಾತ್ರೆಯ ಸಡಗರ ಸಂಭ್ರಮ ಊರಲೆಲ್ಲಾ ಕಂಡು ಬರುತ್ತದೆ.

 ಸಂಭ್ರಮದ ಜಾತ್ರೆಗೆ ನೀವೂ ಮರೆಯದೇ ಬರುತ್ತೀರಲ್ಲ..ನೆನಪುಗಳ ಮೆರವಣಿಗೆಗೆ ಸಜ್ಜಾಗುತೀರಲ್ಲ.

ಹಬ್ಬದ ಆಮಂತ್ರಣದೊಂದಿಗೆ ನಿಮ್ಮ ಪ್ರೀತಿಯ,
ಪವಿತ್ರ

Post a Reply

Your email address will not be published. Required fields are marked *